ಉಡುಪಿ (ತುಳು:ಒಡಿಪು) ಭಾರತ ದೇಶದ ಕರ್ನಾಟಕದ ರಾಜ್ಯದ ಒಂದು ಜಿಲ್ಲೆ. ಮಧ್ವಾಚಾರ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಕೃಷ್ಣ ಮಂದಿರ ಇರುವುದು ಉಡುಪಿಯಲ್ಲಿಯೇ. ಉಡುಪಿ ಜಿಲ್ಲೆ ಆಗಸ್ಟ್ ೧೯೯೭ ನಲ್ಲಿ ಅಸ್ಥಿತ್ವಕ್ಕೆ ಬಂದಿತು. ಉತ್ತರದ ಮೂರು ತಾಲೂಕುಗಳಾದ ಉಡುಪಿ, ಕುಂದಾಪುರ, ಕಾರ್ಕಳ ವನ್ನು ದಕ್ಷಿಣ ಕನ್ನಡದಿಂದ ಪ್ರತ್ಯೇಕಿಸಿ ಉಡುಪಿ ಜಿಲ್ಲೆಯನ್ನಾಗಿ ರಚಿಸಲಾಯಿತು. ಇಲ್ಲಿನ ಜನಸಂಖ್ಯೆ (೨೦೧೧ ರಂತೆ) ೧೧,೭೭,೩೬೧ ಇದರಲ್ಲಿ ೫,೩೨,೧೩೧ ಜನ ಪುರುಷರು ೬,೧೫,೨೩೦ ಮಹಿಳೆಯರೂ ಇದ್ದಾರೆ. ಇಲ್ಲಿನ ಪ್ರಮುಖ ಭಾಷೆಗಳು ತುಳು, ಕನ್ನಡ, ನವಾಯತಿ, ಹಾಗೂ ಕೊಂಕಣಿ. ತುಳು ಮಾತನಾಡುವ ಜನ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಉಡುಪಿ ಹಾಗೂ ದಕ್ಷಿಣ ಕನ್ನಡ ಒಟ್ಟಾಗಿ ತುಳುನಾಡು ಎಂದು ಕರೆಯಲ್ಪಡುತ್ತವೆ. ಉತ್ತರದ ತಾಲೂಕಾದ ಕುಂದಾಪುರದಾದ್ಯಂತ ಕನ್ನಡವನ್ನು ಮಾತ್ರ ಉಪಯೋಗಿಸುತ್ತಾರೆ. ಇಲ್ಲಿನ ಇತರ ಭಾಷೆಗಳೆಂದರೆ, ಬೆಳಾರಿ, ಕೊರಗ, ಉರ್ದು ಮೊದಲಾದವು. ಒಂದು ನಂಬಿಕೆಯ ಪ್ರಕಾರ ಉಡುಪಿಯ ಹೆಸರು ತುಳುವಿನ ಹೆಸರು "ಒಡಿಪು"ವಿನಿಂದ ಬಂದಿರುವುದಾಗಿ ನಂಬಲಾಗಿದೆ. ಈ ತುಳುವಿನ ಹೆಸರು ಮಲ್ಪೆ ಕಡಲ ತೀರದಲ್ಲಿರುವ ಒಡಬಾಂಡೇಶ್ವರ ದೇವಸ್ಥಾನದಿಂದಾಗಿ ಬಂದಿವುದಾಗಿ ಕೆಲವು ವಿದ್ವಾಂಸರು ಸೂಚಿಸಿದ್ದಾರೆ. ಇನ್ನೊಂದು ನಂಬಿಕೆಯ ಪ್ರಕಾರ ಉಡುಪಿಯ ಹೆಸರು ಸಂಸ್ಕೃತ ಶಬ್ದ "ಉಡು" ಹಾಗೂ "ಪ"ಗಳಿಂದ ಬಂದಿರುವುದಾಗಿ ನಂಬಲಾಗಿದೆ. ಸಂಸ್ಕೃತ ಶಬ್ದ "ಉಡು"ವಿನ ಅರ್ಥ "ನಕ್ಷತ್ರಗಳು" ಹಾಗೂ "ಪ"ವಿನ ಅರ್ಥ "ಒಡೆಯ". ದಂತಕತೆಯ ಪ್ರಕಾರ, ಚಂದ್ರನ ಪ್ರಕಾಶವು ಒಂದು ಸಾರಿ ದಕ್ಷರಾಜನ ಶಾಪದಿಂದಾಗಿ ಕಡಿಮೆಯಾಯಿತು. ಚಂದ್ರನು ದಕ್ಷರಾಜನ ೨೭ ಮಗಳಂದಿರನ್ನು (ಹಿಂದೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ೨೭ ನಕ್ಷತ್ರಗಳು) ಮದುವೆ ಆಗಿದ್ದನು. ಚಂದ್ರ ಹಾಗು ಚಂದ್ರನ ಹೆಂಡತಿಯರು ಉಡುಪಿಯ ಚಂದ್ರಮೌಳೀಶ್ವರ ದೇವಸ್ಥಾನದಲ್ಲಿ ಶಿವನನ್ನು ಕುರಿತು ತಪಸ್ಸು ಮಾಡಿದ್ದರು. ಶಿವನು ಒಲಿದು ಚಂದ್ರನ ಪ್ರಕಾಶವು ಮರಳಿ ಬರುವಂತೆ ಮಾಡಿದನು. ಹಾಗಾಗಿ ನಕ್ಷತ್ರಗಳ ಒಡೆಯ (ಸಂಸ್ಕೃತ: ಉಡುಪ) ತಪಸ್ಸು ಮಾಡಿದ್ದರಿಂದ ಈ ಕ್ಷೇತ್ರಕ್ಕೆ ಉಡುಪಿ ಎಂಬ ಹೆಸರು ಬಂದಿತೆಂದು ಎಂದು ಪ್ರತೀತಿ. ಆದರೆ, ಭಾಷಾಶಾಸ್ತ್ರದ ದೃಷ್ಟಿಯಿಂದ ನೋಡಿದರೆ, ಒಡಿಪು ಶಬ್ದದಿಂದ ಉಡುಪಿ ನಿಷ್ಪನ್ನವಾಗಿರುವುದು ಹೆಚ್ಚು ಸಮರ್ಪಕವಾಗಿದೆ. ಈಗಲೂ ತುಳುವಿನಲ್ಲಿ ಈ ಊರನ್ನು ಒಡಿಪು ಎಂದು ಕರೆಯಲಾಗುತ್ತಿರುವುದು ನಿಜಕ್ಕೂ ವಿಶೇಷ.